ಶಂಕರ-ಕಿಂಕರ ಎಂಬ ಗುಂಪಿನಲ್ಲಿ ಸಂಜೀವ ಬೀಳಗಿ ಎಂಬ ಹೆಸರಿನ ವ್ಯಕ್ತಿಯೊಬ್ಬರು ಈ ರೀತಿಯಾಗಿ ಪ್ರಶ್ನಿಸಿದ್ದಾರೆ.

ಅವರ ಈ ಪ್ರಶ್ನೆಗೆ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರು ಶ್ರೀಮನ್ ಮಹಾಭಾರತ ತಾತ್ಪರ್ಯ ನಿರ್ಣಯ ಅರಣ್ಯಪ್ರಾಪ್ತಿ ಎಂಬ ಹೆಸರುಳ್ಳ ೨೨ನೇಯ ಅಧ್ಯಾಯದ ಕೊನೆಯ ಭಾಗದಲ್ಲಿ ಉತ್ತರಿಸಿದ್ದಾರೆ.

ಅವರ ಕೃಪೆಯಿಂದ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವ ಪ್ರಯತ್ನ ಪಡೋಣ.


न विप्राणां च धर्मोयं विद्यया उपजिवनम्।

क्षत्रियाणां च किमुत प्रभासं तेन ते पपुः।।४४९।।


ಜೀವನಕ್ಕಾಗಿ ವಿದ್ಯೆಯನ್ನು ಬಳಸಿಕೊಳ್ಳುವುದು ಬ್ರಾಹ್ಮಣರಿಗೆ ಅಧರ್ಮವಾಗಿದೆ, ಇನ್ನು ಕ್ಷತ್ರಿಯರಿಗೆ ಸರ್ವಥಾ ಧರ್ಮವಲ್ಲ. ಈ ಕಾರಣದಿಂದಲೇ ಪಾಂಡವರು ಒಬ್ಬೊಬ್ಬರಾಗಿ ನೀರು ಕುಡಿದರು.


देवा अपि मनुष्येषु जाताः सुबलिनोपि हि

मानुषेणैव भावेन युक्ताः स्युः केशवाद्रते।।४५०।।


ದೇವತೆಗಳು ಮಾನವರ ಮಧ್ಯದಲ್ಲಿ ಅವತರಿಸಿ ಬಂದಾಗ ಅವರು ಸ್ವತಃ ಬಲಶಾಲಿಗಳಾಗಿದ್ದರೂ ಮಾನವರಂತೆ ವ್ಯವಹರಿಸಬೇಕು. ಆದರೆ ಈ ನಿಯಮ ಭಗವಂತನಿಗೆ ಅನ್ವಯವಾಗುವುದಿಲ್ಲ.


कार्येष्वेषां क्रमेणैव व्यक्तिमायान्ति सद्गुणाः।

अतो भीमार्जुनौ धर्मादत्युत्तमबलावपि।

देवमायां समाश्रित्य धर्मेण स्वापितौ क्षणात्।।४५१।।


ಉಚಿತ ಪ್ರಸಂಗ ಒದಗಿದಾಗ ಮಾತ್ರ ದೇವತೆಗಳು ತಮ್ಮ ಅದ್ಭುತ ಸಾಮರ್ಥ್ಯವನ್ನು ಪ್ರಕಟಪಡಿಸುತ್ತಾರೆ. ಈ ಕಾರಣದಿಂದ ಭೀಮಾರ್ಜುನನು ಯಮನಿಗಿಂತ ಅಧಿಕ ಬಲ ಉಳ್ಳವರಾಗಿದ್ದರೂ ಯಮನು ದೇವಮಾಯೆಯ ಬಲದಿಂದ ಅವರನ್ನು ನಿದ್ರೆಗೆ ಜಾರಿಸಿದನು. 


मुहूर्तमेव सा माया तयोराच्छादने क्षमा।

ततः प्रबुद्धयोर्धर्मो नैव शक्ति शतांशभाक्।।४५३।।


ಆದರೆ ಈ ದೇವಮಾಯೆಯು ಭೀಮಾರ್ಜುನರನ್ನು ಒಂದು ಮುಹೂರ್ತ ಕಾಲ ಮಾತ್ರ ಆವರಿಸಬಲ್ಲದು. ತದನಂತರ ಅವರ ಶಕ್ತಿಯ ನೂರನೇ ಒಂದಂಶದ ಶಕ್ತಿಯು ಯಮನಲ್ಲಿ ಇಲ್ಲ.


ಶುದ್ಧ ಭಾಗವತ ಧರ್ಮದಲ್ಲಿ ನಿರತರಾದ ಭೀಮಸೇನ ದೇವರು ತಮ್ಮ ಪ್ರಾಣ ಉಳಿಸಿಕೊಳ್ಳುವ ಕಾರಣಕ್ಕೂ ವಿದ್ಯೆಯನ್ನು ದುರುಪಯೋಗ ಮಾಡಿಕೊಳ್ಳದೆ ಪರಿಶುದ್ಧ ಭಾಗವತ ಧರ್ಮದ ಅನುಷ್ಠಾನ ಮಾಡಿದರು. ಈ ಕಾರಣದಿಂದ ಅವರು ಯಕ್ಷನ ಪ್ರಶ್ನೆಗೆ ಉತ್ತರಿಸದೇ ಇದ್ದದ್ದು ಹೊರತು ಜ್ಞಾನ ಇಲ್ಲದೇ ಅಲ್ಲ, ಜ್ಞಾನವನ್ನು ಯಾವುದೇ ಕಾರಣಕ್ಕೂ ತಪ್ಪು ದಾರಿಯಲ್ಲಿ ಬಳಸಬಾರದು ಎಂಬ ಧೃಢ ನಿಶ್ಚಯ ಉಳ್ಳವರು ನಮ್ಮ ಭೀಮಸೇನ ದೇವರು.


ಇದಕ್ಕೆ ಸಂಬಂಧ ಪಟ್ಟಂತೆ ಇನ್ನೊಂದು ವಿಚಾರ ಈ ಸಂದರ್ಭದಲ್ಲಿ ಭೀಮಸೇನ ದೇವರೇ ಮೊದಲಾದವರು ನಿದ್ರೆಗೆ ಜಾರಿದರು ಹೊರತು ಮೃತಪಟ್ಟಿಲ್ಲ. ಹೀಗಾಗಿ ನೀವು ಹಿಂದಿ ಧಾರಾವಾಹಿಗಳನ್ನು ಬಿಟ್ಟು ಮೂಲಮಹಾಭಾರತ ಓದುವ ಪ್ರಯತ್ನ ಮಾಡಿ. ನಿಮಗಾಗಿ ನಮ್ಮ ಪಲಿಮಾರು ಮಠ ಸಮಗ್ರ ಮಹಾಭಾರತವನ್ನು ಶ್ರೀಮದಾಚಾರ್ಯರ ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ ಮತ್ತು ಶ್ರೀಮದ್ ವಾದಿರಾಜ ಗುರುಸಾರ್ವಭೌಮರ ಲಕ್ಷಾಲಂಕಾರ ಸಮೇತವಾಗಿ ಪ್ರಕಟಿಸಿದೆ. ನಿಮ್ಮ ಅನುಕೂಲಕ್ಕಾಗಿ ಅದರ ಲಿಂಕ್ ಅನ್ನು ಇಲ್ಲಿ ಹಾಕಿದ್ದೇನೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. 

ಬಹುಶಃ ನಿಮ್ಮ ಪ್ರಶ್ನೆಗೆ (ನೀವು ಜಿಜ್ಞಾಸುಗಳು ಆಗಿದ್ದಲ್ಲಿ) ಸಮರ್ಪಕ ಉತ್ತರ ದೊರಕಿದೆ ಎಂದು ಭಾವಿಸುತ್ತಾ 

ಭೀಮಸೇನ ದೇವರ ಅಂತರ್ಯಾಮಿ ಶ್ರೀಕೃಷ್ಣರೂಪಿ ಭಗವಂತ ಪ್ರೀತನಾಗಲಿ.

ಶ್ರೀ ಕೃಷ್ಣಾರ್ಪಣಮಸ್ತು 

✍️ಶೀಘ್ರಮೋದದಾಸ


https://madhwakart.com/shop/mahabharata-complete-37-books/

Comments