ಪ್ರಾತಃಸಂಕಲ್ಪ ಗದ್ಯ

||ಶ್ರೀಮನ್ ಮೂಲರಾಮೋ ವಿಜಯತೇ||

||ಶ್ರೀ ಗುರುರಾಜೋ ವಿಜಯತೇ||


ಶ್ರೀಮದ್ರಾಘವೇಂದ್ರ ತೀರ್ಥ ಗುರುಸಾರ್ವಭೌಮರಿಂದ ರಚಿಸಲ್ಪಟ್ಟ ಪ್ರಾತಃಸಂಕಲ್ಪ ಗದ್ಯದ ಅರ್ಥಾನುಸಂಧಾನ



ಓಂ ಲೌಕಿಕವೈದಿಕಭೇದಭಿನ್ನವರ್ಣಾತ್ಮಕ–ಧ್ವನ್ಯಾತ್ಮಕ– ಅಶೇಷಶಬ್ದಾರ್ಥ


ಅಪ್ರಾಕೃತ ದೇವಭಾಷೆಯಾದ ಸಂಸ್ಕೃತದ ಅಕಾರಾದಿ 50 ವರ್ಣಗಳು ನಿತ್ಯ ಹಾಗೂ ನಿರ್ವಿಕಾರವಾಗಿವೆ. ಉಳಿದಂತೆ ಎಲ್ಲಾ ಭಾಷೆಗಳೂ ಸಂಸ್ಕೃತ ಭಾಷೆಯಿಂದ ಹುಟ್ಟಿ ಬಂದ ಕಾರಣದಿಂದ ಪ್ರಾಕೃತ ಭಾಷೆಗಳೆನಿಸುತ್ತವೆ. ವೇದಗಳಲ್ಲಿ ಬರುವ ಅನಾದಿನಿತ್ಯವೂ, ಅಪೌರುಷೇಯವೂ ಆಗಿರುವ ಎಲ್ಲಾ ವರ್ಣಗಳು ವೈದಿಕ ವರ್ಣಗಳು; ಪ್ರಾಕೃತ ಭಾಷೆಗಳ ವರ್ಣಗಳೆಲ್ಲ ಲೌಕಿಕ ವರ್ಣಗಳಾಗಿವೆ. ಇಂತಹ ವರ್ಣಗಳ ಸಂಯೋಗದಿಂದ ಪದಗಳೂ ನಾನಾಪದಗಳ ಸಂಯೋಗದಿಂದ ವಾಕ್ಯಗಳೂ ಮಾರ್ಪಾಡಾಗುತ್ತದೆ. ಹೀಗೆ ಪದಗಳಿಂದ ಮತ್ತು  ವಾಕ್ಯಗಳಿಂದ ಮಾತ್ರವಲ್ಲದೇ ಸಕಲ ವರ್ಣಗಳಿಂದ ಭಗವಂತ ಶ್ರೀಮನ್ನಾರಾಯಣನೇ ಮುಖ್ಯ ಪ್ರತಿಪಾದ್ಯ. ಅಂದರೆ ಎಲ್ಲಾ ವರ್ಣಗಳು ಶ್ರೀಹರಿಯ ಸ್ವರೂಪದಿಂದ ಅಭಿನ್ನವಾದ ಆತನ ಮಹಿಮೆಗಳನ್ನೇ ಹೇಳುತ್ತವೆ. ಶ್ರೀಹರಿಯು ಸರ್ವಶಬ್ದ ವಾಚ್ಯನೆಂಬ ಪ್ರಮೇಯವು ಬ್ರಹ್ಮಸೂತ್ರಗಳ ಮೊದಲನೇ ಅಧ್ಯಾಯದಲ್ಲಿ ಯುಕ್ತಿಸಹಿತ ಪ್ರಮಾಣಗಳಿಂದ ಸಾಧಿಸಲ್ಪಟ್ಟಿವೆ.


ಶಬ್ದಗಳು ವಣಾತ್ಮಕ ಮತ್ತು ಧ್ವನ್ಯಾತ್ಮಕವೆಂದು ಎರಡು ವಿಧ. ವಿವಿಧ ಧ್ವನಿಗಳಿಂದ ಭಿನ್ನವರ್ಣಗಳು ಅನುಕರಿಸಲ್ಪಡುವವು. ಐತರೇಯೋಪನಿಷತ್ತಿನ ಭಾಷ್ಯದಲ್ಲಿ ಶ್ರೀಮದಾಚಾರ್ಯರು  ಸಮುದ್ರ, ಮೇಘಾದಿಗಳಿಂದಲೂ, ವೃಕ್ಷಪತನ, ಭೇರಿ ತಾಡನಾದಿಗಳಿಂದಲೂ ಹೊರಡುವ ಸಕಲ ಧ್ವನ್ಯಾತ್ಮಕ ಶಬ್ದಗಳೂ ವಿಷ್ಣುಮಹಿಮೆಗಳನ್ನು ಹೇಳುವ ಆತನ ನಾಮಗಳೆಂದು ಹೇಳಿದ್ದಾರೆ. ಎಲ್ಲ ಶಬ್ದಗಳು ವಿಷ್ಣುವಿನ ನಿರ್ದೋಷತ್ವ, ಗುಣಪೂರ್ಣತ್ವಗಳನ್ನು ನಿರೂಪಿಸುವ ಪ್ರವೃತ್ತಿಯುಳ್ಳವುಗಳು ಎಂದು ತಿಳಿಯಬೇಕು. 


ಬೃಹತ್ಸಂಹಿತೆಯೇ ಮೊದಲಾದ ಗ್ರಂಥಗಳು ಧ್ವನ್ಯಾತ್ಮಕ ಶಬ್ದಗಳನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ರೀತಿಯನ್ನು ತಿಳಿಸಿಕೊಡುತ್ತವೆ. ಭೋರ್ಗರೆಯುವ ಸಮುದ್ರದ ಹುಂಕಾರವು ಶ್ರೀಹರಿಯ ಸರ್ವಾತಿಕ್ರಮಣಶಕ್ತಿಯನ್ನು ಹಾಗೂ ಪರಾಭವ ಶಕ್ತಿಯನ್ನು ಹೇಳುತ್ತದೆ. ಮೇಘಗಳಲ್ಲಿರುವ ವಾಯುವು ಸದಾ ಓಂಕಾರದ ಎಂದು ಧ್ವನಿಗೈಯುತ್ತದೆ. ಓಂಕಾರವು ಭಗವಂತನ ಸರ್ವಾಧಿಕ ಉತ್ಕೃಷ್ಟತೆಯನ್ನು ಹೇಳುತ್ತದೆ. ಇದರಿಂದ ವಿಷ್ಣುವೇ ಸರ್ವೋತ್ತಮನೆಂದು ಮೇಘಗಳು ಘೋಷಿಸುತ್ತವೆ. 


ಮಂದ್ರ, ಅನುದಾತ್ತ, ಸ್ವರಿತ, ಮತ್ತು ಉದಾತ್ತಗಳೆಂಬುವು ಸ್ವರವಿಶೇಷಗಳು, ಇವು ಕ್ರಮದಿಂದ ತಾಲುವಿನ ಅಧ-ಮೂಲ-ಮಧ್ಯ-ಮೇಲ್ಬಾಗಗಳಿಂದ ಉಚ್ಚರಿಸಲ್ಪಡುತ್ತವೆ. ಅನುದಾತ್ತ ರೂಪದ ಭೇರಿನಾದವು ಸರ್ವಶಕ್ತನಾದ ವಿಷ್ಣುವಿನ ಔದಾರ್ಯವನ್ನು ಸಾರುತ್ತದೆ. ಸ್ವರಿತರೂಪದ ಘಂಟಾನಾದ ಮೊದಲಾದ ಶಬ್ದಗಳು, ಇತರ ಸರ್ವವೂ ವಿಷ್ಣುವಿನಿಂದ ನೀಚವೆಂದು ಸಾರುತ್ತವೆ. ಸ್ವರ್ಣಚಂಚು (ವಾದ್ಯವಿಶೇಷ-ನಾಗಸ್ವರ) ಮೊದಲಾದ ಉದಾತ್ತ ಸ್ವರಗಳು ವಿಷ್ಣುವಿನ ನಿತ್ಯೋತ್ತಮತ್ವವನ್ನು ನಿರೂಪಿಸುತ್ತವೆ. ತೀವ್ರ ಸಂಯೋಗವಿಲ್ಲದ (ಸಮಸ್ಥಿತಿಯುಳ್ಳ) ಶ್ವಾಸಾದಿಗಳಿಂದ ಮಂದ್ರಸ್ವರವು ಪ್ರಕಟವಾಗುತ್ತದೆ. ಮಂದ್ರಸ್ವರವು ವಿಷ್ಣುವಿನ ಅಚಲವಾದ ಏಕ ಪ್ರಕಾರ ಸ್ಥಿತಿಯನ್ನು ವರ್ಣಿಸುತ್ತದೆ, ದಧಿಮಂಥನ (ಮೊಸರು ಕಡೆಯುವುದು,) ವೃಕ್ಷ ಪತನಾದಿ ಧ್ವನಿಗಳು ಅಂತರ್ನಾದ ವ್ಯಂಜಕಗಳು, ಇವು ವಿಷ್ಣುವಿನ ಭೀಷಕತ್ವ ಗುಣವನ್ನು ಹೇಳುತ್ತವೆ. ಇದರಂತೆಯೇ ಚಿಟ್ಟೆ, ಹಲ್ಲಿ ಮೊದಲಾದ ಜಂತುಗಳ ನಾದಗಳೂ ವಿಷ್ಣು ಸರ್ವೋತ್ತಮತ್ವವನ್ನೇ ಹೇಳುತ್ತವೆ. ಆದ್ದರಿಂದ ವರ್ಣಾತ್ಮಕ, ಧ್ವನ್ಯಾತ್ಮಕ ಸರ್ವಶಬ್ದಗಳೂ ವಿಷ್ಣುವಿನ ಗುಣಾತಿಶಯಗಳನ್ನೇ ಹೇಳುತ್ತವೆ.


ಶ್ರೀಮದ್ರಾಘವೇಂದ್ರ ತೀರ್ಥ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು


ಸಂಗ್ರಹ - ಆಶುತೋಷ ಪ್ರಭು

ಗ್ರಂಥಋಣ- ಗುರುರಾಜ ಸಂಪುಟ



Comments